ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ, ನಟನೆ ನನ್ನ ಜೀವ ಮತ್ತು ಸಿನಿಮಾ ಮಾಡುವುದನ್ನು ನಿಲ್ಲಿಸಿದರೆ ಬದುಕಲು ಸಾಧ್ಯವಿಲ್ಲ ಎಂದು ಬುಧವಾರ ಹೇಳಿದ್ದಾರೆ.
ನಟ-ರಾಜಕಾರಣಿಯಾಗಿರುವ ಇವರು ಕೇರಳದ ಮೊದಲ ಬಿಜೆಪಿ ಸಂಸದರಾಗಿದ್ದಾರೆ. ಅವರು ತ್ರಿಶೂರ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ಗೋಪಿ ಪ್ರವಾಸೋದ್ಯಮ ರಾಜ್ಯ ಸಚಿವರೂ ಆಗಿದ್ದಾರೆ.
ತಿರುವನಂತಪುರಂನಲ್ಲಿರುವ ಕೇರಳ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗೋಪಿ, “ಚಲನಚಿತ್ರ ನನ್ನ ಪ್ಯಾಶನ್. ಚಿತ್ರವಿಲ್ಲದಿದ್ದರೆ ನಾನು ಸಾಯುತ್ತೇನೆ. ಒಟ್ಟಕೊಂಬನ್ ಸಿನಿಮಾದಲ್ಲಿ ನಟಿಸಲು ಅನುಮತಿ ಕೇಳಿದ್ದೇನೆ. ನಾನು ಇನ್ನೂ ಅನುಮತಿಯನ್ನು ಪಡೆದಿಲ್ಲ, ಆದರೆ ಸೆಪ್ಟೆಂಬರ್ 6 ರಂದು ನಾನು ಒಟ್ಟಕೊಂಬನ್ ಅನ್ನು ಪ್ರಾರಂಭಿಸುತ್ತಿದ್ದೇನೆ.
ಸುಮಾರು 20ರಿಂದ 22 ಚಿತ್ರಗಳಲ್ಲಿ ನಟಿಸಲು ಒಪ್ಪಿಕೊಂಡಿದ್ದೇನೆ. ಎಷ್ಟು ಚಿತ್ರಗಳು ಬಾಕಿ ಇವೆ ಎಂದು ನನ್ನನ್ನು ಕೇಳಿದಾಗ, ನಾನು (ಕೇಂದ್ರ ಗೃಹ ಸಚಿವ) ಅಮಿತ್ ಶಾ ಅವರಿಗೆ ನಾನು ಸುಮಾರು 20 ರಿಂದ 22 ಚಿತ್ರಗಳಲ್ಲಿ ನಟಿಸಲು ಒಪ್ಪಿಕೊಂಡಿದ್ದೇನೆ ಎಂದು ಹೇಳಿದ್ದೇನೆ, ಅವರು (ಶಾ) ಆ ಕಾಗದವನ್ನು ಎಸೆದರು… ನಾನು ಯಾವಾಗಲೂ ನನ್ನ ನಾಯಕರನ್ನು ಪಾಲಿಸುತ್ತೇನೆ. ಆದರೆ ಸಿನಿಮಾ ನನ್ನ ಪ್ಯಾಶನ್, ಇಲ್ಲದಿದ್ದರೆ ನಾನು ಸಾಯುತ್ತೇನೆ ಎಂದು ಹೇಳಿದ್ದಾರೆ.
ಕೇಂದ್ರದಲ್ಲಿ ರಾಜ್ಯ ಖಾತೆ ಸಹಾಯಕ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಸುರೇಶ್ ಗೋಪಿ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಬಳಿಕ ಅವರೇ ಇದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಬೇಕಾಗಿ ಬಂತು. ಇದೀಗ ಸುರೇಶ್ ಗೋಪಿಗೆ ತಾವು ಒಪ್ಪಿಕೊಂಡ ಸಿನಿಮಾಗಳ ಮುಗಿಸುವ ಸಂಕಟ ಎದುರಾಗಿದೆ.
ಹೀಗಾಗಿ ಅಮಿತ್ ಶಾ ಮುಂದೆ ಹೋಗಿ ನಾನು ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಬಹುದೇ ಎಂದು ಮನವಿ ಪತ್ರ ಹಿಡಿದು ಹೋಗಿದ್ದರಂತೆ. ಪತ್ರ ನೋಡಿದ ಅಮಿತ್ ಶಾ, ಎಷ್ಟು ಸಿನಿಮಾ ಮಾಡಬೇಕಿದೆ ಎಂದು ಕೇಳಿದರಂತೆ. ಇದಕ್ಕೆ ಗೋಪಿ 20-22 ಸಿನಿಮಾ ಎಂದಿದ್ದಾರೆ. ಇದನ್ನು ಕೇಳಿ ಅಮಿತ್ ಶಾ ಪತ್ರವನ್ನೇ ಬಿಸಾಕಿದರಂತೆ.
ಇದೀಗ ಮಾಧ್ಯಮಗಳೊಂದಿಗೆ ಮಾತನಾಡಿರುವ ಸುರೇಶ್ ಗೋಪಿ ‘ಸಿನಿಮಾ ನನ್ನ ಪ್ಯಾಶನ್. ಒಂದು ವೇಳೆ ಸಿನಿಮಾಗಾಗಿ ಮಂತ್ರಿಗಿರಿ ಬಿಡಿ ಎಂದರೆ ಖುಷಿಯಿಂದ ಬಿಡುತ್ತೇನೆ. ಆದರೆ ನನಗೆ ಸಿನಿಮಾದಲ್ಲಿ ನಟಿಸಲು ಒಪ್ಪಿಗೆ ಸಿಗಬಹುದು ಎಂಬ ಭರವಸೆಯಿದೆ. ನನ್ನ ಮಂತ್ರಿ ಪದವಿ ನಿರ್ವಹಿಸಲು ನಾಲ್ವರು ಅಧಿಕಾರಿಗಳನ್ನು ಇಟ್ಟುಕೊಂಡಿದ್ದೇನೆ. ಇದು ಸಿನಿಮಾ ಶೂಟಿಂಗ್ ಸೆಟ್ ನಲ್ಲೂ ಮುಂದುವರಿಯಲಿದೆ ಎಂದು ಹೇಳಿದ್ದಾರೆ.