ಮೆಹಂದಿ ಕಾರ್ಯಕ್ರಮದಂದೇ ಮದುಮಗ ನಿಗೂಢವಾಗಿ ನಾಪತ್ತೆಯಾದ ಘಟನೆ ಕುಂದಾಪುರದ ಅಳಿವೆಕೋಡಿ ಗ್ರಾಮದಲ್ಲಿ ನಡೆದಿದೆ.
ಆ.19ರ ಸೋಮವಾರ ತಾಳಿ ಕಟ್ಟಲು ಸಿದ್ಧವಾಗಬೇಕಾಗಿದ್ದ ವರ, ಮದುವೆಯ ಮುಂಚಿನ ದಿನ ಇದ್ದಕ್ಕಿದಂತೆ ನಾಪತ್ತೆಯಾಗಿದ್ದಾನೆ.
ಮದುವೆ ಹಿಂದಿನ ದಿನ ನಡೆಯಬೇಕಿದ್ದ ಮೆಹಂದಿ ಕಾರ್ಯಕ್ರಮದಂದೇ ಮದುಮಗ ಕಣ್ಮರೆಯಾಗಿದ್ದು, ಮನೆಯವರು ಶಾಕ್ ಗೆ ಒಳಗಾಗಿದ್ದಾರೆ.
ಹುಡುಗ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದಾನೆ. ಎರಡು ಕಡೆಯ ಮನೆಯವರು ಸೇರಿ ಮದುವೆ ನಿಶ್ಚಯಿಸಿದ್ದರು. ಅಳಿವೆಕೋಡಿ ಗ್ರಾಮದ ವರನೊಂದಿಗೆ ಉಪ್ಪುಂದ ಗ್ರಾಮದ ಯುವತಿಯ ಮದುವೆ ಸೋಮವಾರ ನಾಗೂರಿನಲ್ಲಿ ನಡೆಯಬೇಕಾಗಿತ್ತು.
ಆ.18 ರಂದು ಹುಡುಗನ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆದಿತ್ತು. ಮದುಮಗ ಆ.18ರಂದು ಮದುವೆಗೆ ಅಗತ್ಯವಿರುವ ಚಿನ್ನಾಭರಣಗಳನ್ನು ಅಂಗಡಿಯಿಂದ ಪಡೆದು, ಚಿನ್ನಾಭರಣಗಳನ್ನು ಮನೆಯಲ್ಲಿಟ್ಟು ಕೆಲವು ವಸ್ತುಗಳನ್ನು ತರಲು ಇದೆ ಎಂದು ಮನೆಯವರಲ್ಲಿ ಹೇಳಿ, ಮೊಬೈಲ್, ಕೈಯಲ್ಲಿದ್ದ ಚಿನ್ನದ ಬ್ರಾಸ್‌ಲೇಟ್ ಅನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾನೆ. ಮೆಹಂದಿಯ ಸಂಭ್ರಮದಲ್ಲಿ ಇದ್ದ ಮನೆಯವರು ಹುಡುಗ ಮನೆಗೆ ಬಾರದೆ ಇರುವುದರಿಂದ ಗಾಬರಿಯಿಂದ ಹುಡುಕಾಟದಲ್ಲಿ ತೊಡಗಿದರು. ಬಳಿಕ ಹುಡುಗ ನಾಪತ್ತೆ ವಿಷಯ ತಿಳಿದು ಅತಿಥಿಗಳೆಲ್ಲಾರೂ ವಾಪಸು ತೆರಳಿದ್ದಾರೆ ಎಂದು ವರದಿಯಾಗಿದೆ.