ಉಡುಪಿ: ನೇಜಾರಿನಲ್ಲಿ ತಾಯಿ ಮತ್ತು ಮೂವರು ಮಕ್ಕಳ ಕಗ್ಗೊಲೆ ಪ್ರಕರಣದ ವಿಚಾರಣೆಯನ್ನು ಮತ್ತೆ ಮುಂದೂಡಲಾಗಿದೆ.
ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿರುವ ಹಿನ್ನೆಲೆಯಲ್ಲಿ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪ್ರಕರಣದ ಮುಂದಿನ ವಿಚಾರಣೆಯನ್ನು ಅ.24ಕ್ಕೆ ಮುಂದೂಡಿ ಆದೇಶ ನೀಡಿದೆ.
ಕಳೆದ ಬಾರಿ ಮುಂದಿನ ವಿಚಾರಣೆಯನ್ನು ಆ.24ಕ್ಕೆ ನಿಗದಿ ಪಡಿಸಿದ್ದ ಹಿನ್ನೆಲೆಯಲ್ಲಿ ಅಂದು ಆರೋಪಿ ಪ್ರವೀಣ್ ಚೌಗುಲೆ ಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ಆರೋಪಿ ಪರ ವಕೀಲ ಗುರುರಾಜ್ ಜಿ.ಎಸ್. ಹಾಜರಿದ್ದರು.
ಈ ಸಂದರ್ಭ ಆರೋಪಿಯು ‘ನನ್ನನ್ನು ಕ್ವಾರಂಟೈನ್ ಜೈಲಿನಲ್ಲಿ ಇರಿಸಲಾಗಿದೆ ಮತ್ತು ನಾನು ಆಹಾರ ಮತ್ತು ನೀರನ್ನು ತೆಗೆದುಕೊಳ್ಳುತ್ತಿಲ್ಲ’ ಎಂದು ನ್ಯಾಯಾಧೀಶರ ಮುಂದೆ ಹೇಳಿದನು. ಆದುದರಿಂದ ನನ್ನನ್ನು ಮುಖ್ಯ ಕಾರಾಗೃಹಕ್ಕೆ ಸ್ಥಳಾಂತರಿಸುವಂತೆ ಆತ ನ್ಯಾಯಾಧೀಶರಲ್ಲಿ ಮನವಿ ಮಾಡಿದನು.
ಆರೋಪಿ ಅಹವಾಲು ಸಲ್ಲಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಜೈಲು ಅಧೀಕ್ಷಕರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಎದುರು ಹಾಜರಾಗುವಂತೆ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಸೂಚಿಸಿದರು. ಅದರಂತೆ ಹಾಜರಾದ ಜೈಲು ಅಧೀಕ್ಷರರು, ಮುಖ್ಯ ಜೈಲಿನಲ್ಲಿ ಆರೋಪಿಗೆ ಬೆದರಿಕೆ ಇರುವುದರಿಂದ ಸುರಕ್ಷತೆ ದೃಷ್ಠಿಯಿಂದ ಅಲ್ಲಿ ಇರಿಸಲಾಗಿದೆ ಎಂದರು. ಆರೋಪಿ ಉದ್ದೇಶಪೂರ್ವಕವಾಗಿ ಆಹಾರ ಮತ್ತು ನೀರನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಜೈಲು ಅಧೀಕ್ಷಕರು ಕೋರ್ಟ್ ಮುಂದೆ ತಿಳಿಸಿದ್ದರು. ಬಳಿಕ ನ್ಯಾಯಾಧೀಶರು ಆರೋಪಿಗೆ ಆಹಾರ ಮತ್ತು ನೀರನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದ್ದರು.
ಉಡುಪಿ ಸಮೀಪದ ನೇಜಾರು ಬಳಿಯ ತೃಪ್ತಿ ಲೇಜೌಟ್‌ನಲ್ಲಿ ಹಸೀನಾ ಹಾಗೂ ಅವರ ಮೂವರು ಮಕ್ಕಳಾದ ಅಫ್ನಾನ್ (23), ಅಯ್ನಾಝ್ (21), ಆಸೀಮ್‌ನ್ನು (12) ಬರ್ಬರವಾಗಿ ಇರಿದು ಹತ್ಯೆ ಮಾಡಲಾಗಿತ್ತು. ಈ ಘಟನೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು ಆರೋಪಿ ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿಯ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯಲ್ಲಿ ಪ್ರವೀಣ್ ಅರುಣ್ ಚೌಗಲೆ(35)ಯನ್ನು ಮೊಬೈಲ್ ಟವರ್ ಆಧರಿಸಿ ಕುಡಚಿಯಲ್ಲಿ ಬಂಧಿಸಲಾಗಿತ್ತು. ಆರೋಪಿಯನ್ನು ವಿಚಾರಣೆ ನಡೆಸಿದಾಗ ಆತ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಉಡುಪಿಯ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗೆ ನ್ಯಾಯಾಲಯ 14 ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದೆ.