ಮನೆಯಲ್ಲಿ ಗೋಮಾಂಸ ಸಂಗ್ರಹಿಸಲಾಗಿದೆ ಎಂದು ಶಂಕಿಸಿ ಪೊಲೀಸರು ದಾಳಿ ನಡೆಸಿದ್ದರಿಂದ ಆಘಾತಕ್ಕೊಳಗಾಗಿ ಮಹಿಳೆ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ನಡೆದಿದೆ.
ಮೃತಪಟ್ಟ ಮಹಿಳೆಯನ್ನು ಖತಾಯಿ ಗ್ರಾಮದ ನಿವಾಸಿ ರಝಿಯಾ(55) ಎಂದು ಗುರುತಿಸಲಾಗಿದೆ.
ಗೋಮಾಂಸ ಸಂಗ್ರಹಿಸಲಾಗಿದೆ ಎಂಬ ಪೊಲೀಸ್ ಮಾಹಿತಿದಾರನ ಸುಳಿವನ್ನು ಆಧರಿಸಿ ನಾಲ್ವರು ಕಾನ್ಸ್‌ಟೇಬಲ್‌ಗಳ ತಂಡ ಪೊಲೀಸ್ ಲೈನ್ ನಲ್ಲಿರುವ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಅವರಿಗೆ ಅಲ್ಲಿ ಯಾವುದೇ ವಸ್ತುಗಳು ಕಂಡು ಬಂದಿಲ್ಲ ಎಂದು ತಿಳಿದು ಬಂದಿದೆ.
ಗೋಮಾಂಸ ಮಾರಾಟ ಅಥವಾ ಸಾಗಣೆಯನ್ನು ಉಲ್ಲಂಘಿಸಿದ ಶಂಕೆಯ ಮೇಲೆ ಈ ದಾಳಿ ನಡೆಸಲಾಗಿದೆ ಎಂದು ಬಿಜ್ನೋರ್‌ನ ಪೊಲೀಸ್ ಅಧೀಕ್ಷಕ ಅಭಿಷೇಕ್ ಝಾ ಅವರು ತಿಳಿಸಿದ್ದಾರೆ.
ನಾಲ್ವರು ಪೊಲೀಸರು ಮನೆಗೆ ನುಗ್ಗಿ ಅಲ್ಲಿದ್ದ ನನ್ನ ತಾಯಿಯ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮೃತರ ಪುತ್ರ ನಾಸಿಂ ಆರೋಪಿಸಿದ್ದಾರೆ. ನಾವು ಗೋಮಾಂಸ ಸಂಗ್ರಹಿಸಿಲ್ಲ ಎಂದು ಮನವಿ ಮಾಡಿದರೂ ಪೊಲೀಸರು ಮನೆಯ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದರು. ಪೊಲೀಸರ ವರ್ತನೆಯಿಂದ ನನ್ನ ತಾಯಿ ಭಯಭೀತರಾಗಿ, ಆಘಾತಕ್ಕೊಳಗಾದರು. ನಾವು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದೆವು. ವೈದ್ಯರು ಆಕೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ನಾಸಿಂ ಹೇಳಿದ್ದಾರೆ.