ಮದ್ರಸಾಗಳಿಗೆ ಮಾನ್ಯತೆ ನೀಡಲು ಎರಡು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಉತ್ತರಪ್ರದೇಶ ಸರಕಾರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
ಮಾನ್ಯತೆ ಪಡೆಯದ ಮದ್ರಸಾಗಳಲ್ಲಿನ ವಿದ್ಯಾರ್ಥಿಗಳನ್ನು ರಾಜ್ಯ ಸರ್ಕಾರಿ ಶಾಲೆಗಳಿಗೆ ಸ್ಥಳಾಂತರಿಸುವ ವಿವಾದದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಈ ಕುರಿತು ಮಾಹಿತಿ ನೀಡಿದ ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಓಂ ಪ್ರಕಾಶ್ ರಾಜ್‌ಭರ್, ‘ಹೊಸದಾಗಿ ಸ್ಥಾಪಿಸುವ ಎರಡು ವಿಶ್ವವಿದ್ಯಾಲಯಗಳೊಂದಿಗೆ ಉತ್ತರ ಪ್ರದೇಶದ ಮದ್ರಸಾ ಶಿಕ್ಷಣ ಮಂಡಳಿಯನ್ನು ಜೋಡಿಸಲಾಗುವುದು. ಈ ವಿವಿಗಳಿಂದ ಎಲ್ಲ ಮದ್ರಸಾಗಳು ಮಾನ್ಯತೆ ಪಡೆಯಬೇಕು ಎಂಬ ಕಾನೂನು ತರಲಾಗುವುದು. ಆ ಮೂಲಕ ಭವಿಷ್ಯದಲ್ಲಿ ಯಾವುದೇ ವಿವಾದಗಳು ಉಂಟಾಗದು ಎಂದು ತಿಳಿಸಿದ್ದಾರೆ.
ಪ್ರಸಕ್ತ ರಾಜ್ಯದಲ್ಲಿ ಮದರಾಸಗಳಿಗೆ ಉತ್ತರ ಪ್ರದೇಶ ಮದ್ರಸಾ ಶಿಕ್ಷಣ ಮಂಡಳಿ ಮಾನ್ಯತೆ ನೀಡುತ್ತಿದೆ.
ಇನ್ನು ಸಚಿವರು ಹೇಳಿರುವ ಈ ವಿವಿಗಳ ಸ್ಥಾಪನೆಗೆ ಯಾವುದೇ ಗಡುವನ್ನು ನೀಡಲಾಗಿಲ್ಲ ಎನ್ನಲಾಗಿದೆ.