ವಯನಾಡು ಭೂ ಕುಸಿತ ಸಂತ್ರಸ್ತರಿಗೆ ನೀಡಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವಂಚನೆ ಪ್ರಕರಣದ ಆರೋಪಿಯೋರ್ವ 15 ಕೋಟಿ ದೇಣಿಗೆ ನೀಡಲು ಮುಂದಾಗಿದ್ದಾರೆ.
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಸುಕೇಶ್ ಚಂದ್ರಶೇಖರ್ ಈಗ ನವದೆಹಲಿಯ ಮಂಡೋಲಿ ಜೈಲಿನಲ್ಲಿದ್ದಾರೆ. ವಯನಾಡು ದುರಂತದಿಂದ ದುಃಖಿತನಾಗಿದ್ದು, ಅಗತ್ಯವಿದ್ದಲ್ಲಿ ಸೂಕ್ತ ನೆರವು ನೀಡಲು ಸಿದ್ಧ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಪತ್ರ ಬರೆದಿರುವುದನ್ನು ವಕೀಲ ಅನಂತ್ ಮಲಿಕ್ ಕೂಡ ಖಚಿತಪಡಿಸಿದ್ದಾರೆ. ನನ್ನ ಫೌಂಡೇಶನ್‌ನಿಂದ 15 ಕೋಟಿ ದೇಣಿಗೆಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುತ್ತಿದ್ದು, ಇದನ್ನು ಸ್ವೀಕರಿಸುವಂತೆ ನಿಮ್ಮಲ್ಲಿ ಮನವಿ ಮಾಡುತ್ತೇನೆ. ನಾನು ನೀಡುತ್ತಿರುವ ನೆರವನ್ನು ಸಂತ್ರಸ್ತರಿಗೆ ತಕ್ಷಣದಲ್ಲಿ 300 ಮನೆ ನಿರ್ಮಿಸಲು ಸಹಾಯವಾಗಿ ನೀಡುತ್ತಿದ್ದೇನೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಚಂದ್ರಶೇಖರ್ ಬರೆದ ಪತ್ರಕ್ಕೆ ಕೇರಳ ಸರ್ಕಾರವು ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ.