ಕೇರಳದ ವಯನಾಡ್ ನಲ್ಲಿ ಸಂಭವಿಸಿದ ಭೀಕರ ಭೂಕುಸಿತದ ಅವಶೇಷಗಳಡಿ ಈಗಾಗಲೇ 330ಕ್ಕೂ ಅಧಿಕ ಮೃತದೇಹವನ್ನು ಪತ್ತೆಹಚ್ಚಲಾಗಿದೆ. 300ರಷ್ಟು ಮಂದಿ ಇನ್ನು ಕೂಡ ನಾಪತ್ತೆಯಾಗಿದ್ದಾರೆ. ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವವರ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿದಿದೆ. ಈ ಮಧ್ಯೆ ಮನೆ ಕೊಚ್ಚಿಕೊಂಡು ಹೋದರೂ 40 ದಿನದ ಪುಟ್ಟ ಹೆಣ್ಣು ಮಗು ಮತ್ತು ಆಕೆಯ ಆರು ವರ್ಷದ ಸಹೋದರ ವಿಕೋಪದಲ್ಲಿ ಬದುಕಿ ಉಳಿದಿರುವ ಪವಾಡ ಸದೃಶ ಘಟನೆ ವರದಿಯಾಗಿದೆ.
ಕುಟುಂಬದ ಆರು ಮಂದಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದರೂ, ಅನಾರ ಮತ್ತು ಮುಹಮ್ಮದ್ ಹಯಾನ್ ಬದುಕಿ ಉಳಿದಿದ್ದಾರೆ. ಎರಡು ಮಕ್ಕಳು ಬದುಕುಳಿದ ಕುಟುಂಬದ ಜನರನ್ನು ಮತ್ತೆ ಸೇರಿಕೊಂಡಿದೆ.
ಜುಲೈ 29 ಹಾಗೂ 30ರ ನಡುವೆ ವಯನಾಡ್ ನಲ್ಲಿ ಕೇವಲ 24 ಗಂಟೆ ಅವಧಿಯಲ್ಲಿ 572 ಮಿಲಿಮೀಟರ್ ಮಳೆಯಾಗಿದ್ದು, ಭಾರಿ ಪ್ರಮಾಣದ ಭೂಕುಸಿತಕ್ಕೆ ಕಾರಣವಾಗಿತ್ತು. ಸಿಎಂ ಪಿಣರಾಯ್ ವಿಜಯನ್ ಮಾತನಾಡಿ ದುರಂತದ ಸ್ಥಳದಲ್ಲಿ ಇನ್ನು ನಾಪತ್ತೆಯಾಗಿರುವವರು ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ.
2018ರಲ್ಲಿ 500ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದ ದುರಂತವನ್ನು ಹೊರತುಪಡಿಸಿದರೆ, ಕೇರಳದ ಇತಿಹಾಸದಲ್ಲೇ ಇದು ಅತ್ಯಂತ ಭೀಕರ ಪ್ರಕೃತಿ ವಿಕೋಪವಾಗಿದೆ.