ವಯನಾಡು ಭೂಕುಸಿತ ದುರಂತ ಪೀಡಿತ ಕುಟುಂಬದ ಹೆಣ್ಣುಮಕ್ಕಳಿಗೆ ಬದುಕು ನೀಡಲು ಇದೀಗ ಇಬ್ಬರು ಯುವಕರು ಮುಂದೆ ಬಂದಿದ್ದಾರೆ.
ಬೂದನೂರು ತಯ್ಯೂರು ಮೂಲದ ವಿಷ್ಣುಕುಮಾರ್ (30) ಮತ್ತು ಮಾವೇಲಿಕ್ಕರ ಮೂಲದ ದೀಪುರಾಜ್ (31) ಅನಾಥರಾದ ಯುವತಿಯರಿಬ್ಬರಿಗೆ ಜೀವನ ನೀಡಲು ಮುಂದಾಗಿದ್ದಾರೆ.
ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ದುರಂತದಿಂದ ಮನನೊಂದ ತಾಯಿಯ ಕೋರಿಕೆಯಂತೆ ವಿಷ್ಣು ಈ ನಿರ್ಧಾರಕ್ಕೆ ಬಂದಿದ್ದಾರೆ. ಆಟೋ ಚಾಲನೆ ಮಾಡಿ ಜೀವನ ಸಾಗಿಸುತ್ತಿರುವ ವಿಷ್ಣು, ವಯನಾಡಿನ ಯುವತಿಯೋರ್ವಳಿಗೆ ಜೀವನ ನೀಡುವುದಾಗಿ ಹೇಳಿದ್ದಾರೆ.
ಇನ್ನು ದೀಪುರಾಜ್ ಎಂಬಾತ ಖಾಸಗಿ ಬಸ್ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈತ ತನ್ನ ಬಯಕೆಯನ್ನು ಹಂಚಿಕೊಂಡಿದ್ದು, ಓರ್ವ ಸಂತ್ರಸ್ತೆಗೆ ಜೀವನ ನೀಡುವುದಾಗಿ ಹೇಳಿಕೊಂಡಿದ್ದಾನೆ. ದೀಪು ಪೋಸ್ಟರ್ ವೈರಲ್ ಆಗುತ್ತಿದ್ದಂತೆ ಅವರಿಗೆ ಹಲವು ಕರೆಗಳು ಬಂದಿದೆ ಎನ್ನಲಾಗಿದೆ.
ಶನಿವಾರ ಸಂಜೆ ದೀಪುರಾಜ್ ವಯನಾಡಿಗೆ ತೆರಳಲು ಸಿದ್ಧತೆ ನಡೆಸಿದ್ದಾರೆ. ಈ ವೇಳೆ ದೀಪುವಿನ ಸಹೋದರಿಯರು ಸೋನಿ ಮತ್ತು ಕಿಂಗಿಣಿ ಕೂಡ ಜೊತೆಗಿರಲಿದ್ದಾರೆ ಎನ್ನಲಾಗಿದೆ.