ವಯನಾಡು ಭೂಕುಸಿತ ಸ್ಥಳದಲ್ಲಿ 350ಕ್ಕೂ ಅಧಿಕ ಮಂದಿಯ ಮೃತದೇಹ ಪತ್ತೆಯಾಗಿದೆ. ಬದುಕುಳಿದವರು ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಈ ಮಧ್ಯೆ ಹಾನಿಗೊಳಗಾದ ಮನೆಗಳಿಗೆ ಕಳ್ಳರು ನುಗ್ಗಿ ಅಳಿದುಳಿದ ವಸ್ತುಗಳನ್ನು ಕದ್ದೊಯ್ಯುತ್ತಿದ್ದಾರೆ ಎಂದು ಜನರು ದೂರಿದ್ದಾರೆ. ಈ ಹಿನ್ನೆಲೆ ಘಟನೆ ನಡೆದ ಸ್ಥಳಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.
ದುರಂತ ನಡೆದ ಸ್ಥಳದಲ್ಲಿ ಜನವಸತಿ ಇರದ ಕಾರಣ ಕಳ್ಳರು ಅದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ಮನೆಯಲ್ಲಿನ ಮೌಲ್ಯಯುತ ವಸ್ತುಗಳು ಕಳ್ಳತನವಾಗುತ್ತಿವೆ. ಹೀಗಾಗಿ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.
ಭೂಕುಸಿತದ ಸಂದರ್ಭದಲ್ಲಿ ಪ್ರಾಣ ರಕ್ಷಣೆಗಾಗಿ ಮನೆಗಳನ್ನು ತೊರೆದು ರೆಸಾರ್ಟ್‌ನಲ್ಲಿ ತಂಗಿದ್ದೇವೆ. ಆದರೆ ಪರಿಸ್ಥಿತಿ ಅವಲೋಕನಕ್ಕಾಗಿ ಮನೆಯ ಬಳಿ ತೆರಳಿದ್ದಾಗ ಬಾಗಿಲುಗಳು ಮುರಿದುಕೊಂಡಿತ್ತು, ಕಳ್ಳರು ನಮ್ಮಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಕೊಂಡೊಯ್ದಿದ್ದಾರೆ ಎಂದು ಆರೋಪಿಸಿದ್ದಾರೆ.