ಮೇಪ್ಪಾಡಿ: ವಯನಾಡು ಭೀಕರ ಭೂಕುಸಿತಕ್ಕೆ ಮೃತರ ಸಂಖ್ಯೆ 350ರ ಗಡಿ ದಾಟಿದೆ. 200 ಕ್ಕೂ ಅಧಿಕ ಮಂದಿ ಇನ್ನು ಕೂಡ ನಾಪತ್ತೆಯಾಗಿದ್ದಾರೆ.
ಆ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನರು ತಮ್ಮ ಕುಟುಂಬಸ್ಥರನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಕಳತ್ತಿಂಗಲ್ ನೌಶೀಬಾ ಅವರ ಕುಟುಂಬದ 16 ಮಂದಿ ಮುಂಡಕ್ಕೈ ಭೂಕುಸಿತದ ವೇಳೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ನೌಶಿಬಾ ಅವರ ತಂದೆ, ತಾಯಿ ಸಹೋದರ, ಸೊಸೆಯಂದಿರು, ಗಂಡನ ಕುಟುಂಬದ ಸದಸ್ಯರು ಸೇರಿ 16 ಮಂದಿಯನ್ನು ದುರಂತದಲ್ಲಿ ಕಳೆದುಕೊಂಡಿದ್ದಾರೆ.
ನೌಶೀಬಾ (40) ಕಳೆದ ಮೂರು ದಿನಗಳಿಂದ ಮೆಪ್ಪಾಡಿ ಕುಟುಂಬ ಆರೋಗ್ಯ ಕೇಂದ್ರದ ಎದುರು ಕಣ್ಣೀರಿಡುತ್ತಾ ನಿಂತಿದ್ದಾರೆ. ಭೂಕುಸಿತದಿಂದ ಧ್ವಂಸಗೊಂಡ ಚೂರಲ್‌ಮಲಾ ಮತ್ತು ಮೆಪ್ಪಾಡಿ ಗ್ರಾಮಗಳಿಂದ ಅಗೆದ ಹೊಸ ದೇಹವನ್ನು ಗುರುತಿಸಲು ಪ್ರತಿ ಬಾರಿ ತಂದಾಗ ನೌಶೀಬಾ ತನ್ನವರು ಇದ್ದಾರ ಎಂದು ನೋಡಲು ಹೆಜ್ಜೆ ಹಾಕುತ್ತಾರೆ.
ಶನಿವಾರ ಬಿಳಿ ಬಟ್ಟೆಯಲ್ಲಿ ಸುತ್ತಿ ನೀಲಿ ಶಾಯಿಯಲ್ಲಿ "ಸಂಖ್ಯೆ 168-ಹೆಣ್ಣು ಮಗು" ಎಂದು ಬರೆದ ಹೊಸ ದೇಹವನ್ನು ತರಲಾಯಿತು. ಸ್ವಯಂಸೇವಕ ಶವವನ್ನು ಗುರುತಿಸಲು ಯಾರಾದರೂ ಇದ್ದಾರೆಯೇ ಎಂದು ಜೋರಾಗಿ ಕೇಳಿದರು. ನೌಶೀಬಾ ತನ್ನ ಸೊಸೆ ಇರಬಹುದೆಂದು ಭಾವಿಸಿ ಪರೀಕ್ಷಿಸಲು ತೆರಳಿದ್ದಾರೆ, ಆದರೆ ಅದು ಅವಳ ಕುಟುಂಬದ ಸದಸ್ಯೆಯಾಗಿರಲಿಲ್ಲ.
ಆಕೆಯ ತಂದೆ ಕುಂಞಮ್ಮದ್, ತಾಯಿ ಆಯಿಷಾ ಮತ್ತು ಆಕೆಯ ಇಬ್ಬರು ಸೊಸೆಯಂದಿರಾದ ಆಯಿಷಾ ಅಮಾನ ಮತ್ತು ನಫ್ಲಾ ಅವರ ಶವಗಳು ಪತ್ತೆಯಾಗಿವೆ, ಆದರೆ ಸಹೋದರ ಮನ್ಸೂರ್, ಅವರ ಪತ್ನಿ ಮುಹ್ಸಿನಾ, ಅವರ ಇಬ್ಬರು ಮಕ್ಕಳಾದ ಶಹಲಾ ಮತ್ತು ಶಫ್ನಾ ಮತ್ತು ಅವರ ಕಿರಿಯ ಸಹೋದರ ನೌಫಲ್ ಅವರ ಪತ್ನಿ ಮತ್ತು ದಂಪತಿಯ ಇಬ್ಬರು ಮಕ್ಕಳಾದ ನಿಹಾಲ್ ಮತ್ತು ಇಶಾ ಮೆಹ್ರಿನ್ ಕಾಣೆಯಾಗಿದ್ದಾರೆ.
ದುರಂತ ಸ್ಥಳದಲ್ಲಿ ಹುಡುಕಿಕೊಂಡು ಬಂದ ಪ್ರತಿ ಮೃತದೇಹವನ್ನು ತನ್ನವರದ್ದಿರಬಹುದು ಎಂದು ಹುಡುಕಾಡುತ್ತಿದ್ದಾರೆ.