ವಯನಾಡ್ ಭೂಕುಸಿತ ಸಂತ್ರಸ್ತರಿಗೆ 100 ಮನೆ ನಿರ್ಮಾಣ ಮಾಡಿಕೊಡುವುದಾಗಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಸಿದ್ದರಾಮಯ್ಯ,’ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ತತ್ತರಿಸಿರುವ ಕೇರಳದ ಜೊತೆ ರಾಜ್ಯ ಸರ್ಕಾರ ನಿಂತಿದೆ. ಭೂಕುಸಿತದಿಂದ ಸೂರು ಕಳೆದುಕೊಂಡ 100 ಕುಟುಂಬಗಳಿಗೆ ನಮ್ಮ ಸರ್ಕಾರ ಮಾನವೀಯ ನೆಲೆಯಲ್ಲಿ ಮತ್ತೆ ಮನೆ ನಿರ್ಮಿಸಿಕೊಡಲಿದೆ ಎಂಬ ಭರವಸೆಯನ್ನು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ನೀಡಿದ್ದೇನೆ. ಸಂಕಷ್ಟದ ಕಾಲದಲ್ಲಿ ಜೊತೆ ನಿಂತು ಭರವಸೆಯನ್ನು ಮರಳಿ ಕಟ್ಟೋಣ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟ ಕನ್ನಡಿಗರಿಗೆ ಈಗಾಗಲೇ ತಲಾ ರೂ.5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಭೂಕುಸಿತದಿಂದ ಸಂಕಷ್ಟದಲ್ಲಿರುವ ಕನ್ನಡಿಗರ ನೆರವಿಗೆ ಧಾವಿಸಲು ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳನ್ನು ನೇಮಿಸಲಾಗಿತ್ತು.
ಇದಲ್ಲದೆ ಅಗತ್ಯ ಸಲಕರಣೆಗಳನ್ನು ಹೊತ್ತ ಬೆಂಗಳೂರಿನ ಎನ್.ಡಿ.ಆರ್.ಎಫ್ ಹಾಗೂ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಸೇನಾಪಡೆಯ ತಂಡಗಳು ವಯನಾಡು ತಲುಪಿದ್ದವು.