Breaking:

ವಯನಾಡು ಭೂ ಕುಸಿತದಲ್ಲಿ ಕುಟುಂಬದ 9 ಮಂದಿಯನ್ನು ಕಳೆದುಕೊಂಡಿದ್ದ ಯುವತಿಯ ಬಾಳಲ್ಲಿ ಮತ್ತೊಂದು ದುರಂತ

ಕೇರಳದ ವಯನಾಡ್‌ನ ಚೂರಲ್ಮಲದಲ್ಲಿ ಜುಲೈ 30 ರಂದು ನಡೆದ ಭೂಕುಸಿತದಲ್ಲಿ ತನ್ನ ತಂದೆ ತಾಯಿ ಸೋದರಿ ಸೇರಿದಂತೆ ಕುಟುಂಬದ 9 ಮಂದಿಯನ್ನು ಕಳೆದುಕೊಂಡಿದ್ದ ಯುವತಿಗೆ ಮತ್ತೊಂದು ಆಘಾತ ಎದುರಾಗಿದ್ದು, ಭೂಕುಸಿತ ಘಟನೆ ನಡೆದು ಸರಿಸುಮಾರು ಒಂದು ತಿಂಗಳ ಬಳಿಕ ಈಗ ಅವರು ತಮ್ಮ ಭಾವಿ ಪತಿಯನ್ನು ಅಪಘಾತದಲ್ಲಿ ಕಳೆದುಕೊಂಡಿದ್ದಾರೆ

ವಯನಾಡ್‌ ಭೂಕುಸಿತದಲ್ಲಿ ತನ್ನವರೆಲ್ಲರನ್ನು ಕಳೆದುಕೊಂಡಿದ್ದ ಆಕೆಗೆ ಬದುಕುವ ಭರವಸೆ ನೀಡಿದ್ದು, ಆಕೆಯ ಭಾವಿ ಪತಿ ಹಾಗೂ ಬಾಲ್ಯದ ಗೆಳೆಯ 24 ವರ್ಷದ ಜೀಸನ್ ಅವರು. ಆದರೆ ಈಗ ಅವರು ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದು, ಶ್ರುತಿ ಬದುಕಿನ ಕೊನೆಯ ಭರವಸೆಯೂ ಕೂಡ ಇದರಿಂದ ನಂದಿದಂತಾಗಿದೆ

ಬಾಲ್ಯದ ಗೆಳೆಯರಾದ ಶ್ರುತಿ ಹಾಗೂ ಜೀಸನ್ ಮಧ್ಯೆ ವಿವಾಹ ನಿಶ್ಚಿಯವಾಗಿತ್ತು. ಈ ಹಿನ್ನೆಲೆಯಲ್ಲಿ ಮದುವೆಯ ಶಾಪಿಂಗ್‌ಗಾಗಿ ಇಬ್ಬರು ಕಾರಿನಲ್ಲಿ ಜೊತೆಯಾಗಿ ಸಾಗುತ್ತಿದ್ದಾಗ ಕಾರು ಅಪಘಾತಕ್ಕೀಡಾಗಿದೆ. ಮಂಗಳವಾರ ಮಧ್ಯಾಹ್ನ ಜೀಸನ್ ಅವರು ಪ್ರಯಾಣಿಸುತ್ತಿದ್ದ ಓಮ್ನಿ ಕಾರು ವಯನಾಡ್‌ನ ಕಲ್ಪೆಟ್ಟ ಬಳಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡಿದ್ದ ಜೀಸನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿನ್ನೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಇದರಿಂದ ಶ್ರುತಿಯವರ ಬದುಕಿನ ಭರವಸೆಯೇ ಭಗ್ನವಾಗಿದೆ. ಕಾರಿನಲ್ಲಿದ್ದ ಇತರರು ಸಣ್ಣ ಪುಟ್ಟ ಗಾಯಗಳಿಂದಾಗಿ ಅನಾಹುತದಿಂದ ಪಾರಾಗಿದ್ದಾರೆ.

Share this article

ಟಾಪ್ ನ್ಯೂಸ್