ರೆಹಮಾನ್ ಕೊಲೆಯಾದ ಯುವಕ
ಬೆಂಗಳೂರು; ಯುವಕನನ್ನು ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ನಗರದ ಹೊರವಲಯದ ಸೊಂಡೆಕುಪ್ಪ ಗ್ರಾಮ ಪಂಚಾಯಿತಿ ಬಳಿ ನಡೆದಿದೆ.
ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ರೆಹಮಾನ್ (17) ಕೊಲೆಯಾದ ಯುವಕ. ಅದೇ ಗ್ರಾಮದ ರೇಣುಕಾ ಹಾಗೂ ಪರ್ಮಿ ಎಂಬವರು ರೆಹಮಾನ್ ಎದೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.
ರೆಹಮಾನ್ ಹುಟ್ಟು ಹಬ್ಬಕ್ಕೆಂದು ಮಂಗಳವಾರ ಕೇಕ್ ತರಲು ಬೇಕರಿ ಬಳಿ ಹೋಗಿದ್ದ. ಈ ವೇಳೆ ಆರೋಪಿಗಳು ಅಂಗಡಿ ಮುಂದೆ ಕಾರು ಪಾರ್ಕಿಂಗ್ ಮಾಡಿದ್ದು, ಇದನ್ನು ರೆಹಮಾನ್ ಪ್ರಶ್ನೆ ಮಾಡಿದ್ದ ಇದೇ ವಿಚಾರಕ್ಕೆ ಕಾರಿನಲ್ಲಿದ್ದವರು ಆತನ ಜೊತೆ ಗಲಾಟೆ ಮಾಡಿದ್ದರು.
ಈ ವೇಳೆ ಆರೋಪಿಗಳಾದ ರೇಣುಕಾ ಹಾಗೂ ಪರ್ಮಿ ಕಾರಿನಲ್ಲಿದ್ದ ಚಾಕು ಹಾಗೂ ಪಿಸ್ತೂಲ್ ತೋರಿಸಿ ಬೆದರಿಸಿದ್ದಾರೆ. ಬಳಿಕ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿ ರೇಣುಕಾನನ್ನು ಮಾದನಾಯಕನಹಳ್ಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.